ಎಪಿಡೋಟ್

	ಬಹುಮಟ್ಟಿಗೆ ಸುಣ್ಣಾಂಶವುಳ್ಳ ಜಲಜಶಿಲೆ ಮತ್ತು ಅಗ್ನಿಶಿಲೆಗಳು ರೂಪಾಂತರಗೊಂಡಾಗ ಆಗುವ ಒಂದು ಖನಿಜ. ಪಿಸ್ಟಸೈಟ್ ಎಂದೂ ಕರೆಯುತ್ತಾರೆ. ಈ ಖನಿಜದ ಹರಳುಗಳ ಮಾನೊಕ್ಲೈನಿಕ್ ವರ್ಗಕ್ಕೆ ಸೇರಿವೆ. ಅವಳಿ ಹರಳುಗಳೂ ಉಂಟು. ಅಲ್ಲದೆ ಫಲಕ, ಅಲುಗು ಮತ್ತು ಸೂಜಿಯೋಪಾದಿಯ ಆಕಾರಗಳೂ ಇವೆ. ಹಲವು ಬಾರಿ ಕಣಗಳ ಮುದ್ದೆಯಾಗಿಯೂ ದೊರೆಯುತ್ತದೆ. 

	ರಾಸಾಯನಿಕ ಸಂಯೋಜನೆಯಲ್ಲಿ ಇದು ಕ್ಯಾಲ್ಸಿಯಂ, ಅಲ್ಯೂಮಿನಂ ಮತ್ತು ಕಬ್ಬಿಣಾಂಶಗಳ ಸಿಲಿಕೇಟು. ಬಣ್ಣದಲ್ಲಿ ವಿವಿಧ ಛಾಯೆಯ ಹಸಿರುಗಳುಂಟು: ಬಹುಮಟ್ಟಿಗೆ ವಿಶಿಷ್ಟವಾದ ಪಿಸ್ತಾ ಹಸಿರು ಅಥವಾ ಹಳದಿ ಮಿಶ್ರಿತ ಹಸಿರು ಮತ್ತು ಕಪ್ಪು ಮಿಶ್ರಿತ ಹಸಿರು ; ಹಲವು ಬಾರಿ ಕಪ್ಪು, ಕೆಂಪು, ಹಳದಿ, ಬಿಳಿ ಇತ್ಯಾದಿ. ಒರೆ ಬಣ್ಣವಿಲ್ಲದ್ದು ಅಥವಾ ಬೂದು ಛಾಯೆಯದು. ಸಾಮಾನ್ಯವಾಗಿ ಸೀಳು ಉತ್ತಮ ಬಗೆಯದು. ಬಿರಿತ ಅಸ್ಪಷ್ಟ ಭಿದುರತೆ ಉತ್ತಮ ಗಾಜು, ಮುತ್ತು ಗೋಂದುಗಳಂಥ ಹೊಳಪೂ ಉಂಟು. ವ್ಯಾಪ್ತಿ ಪಾರಕದಿಂದ ಅಪಾರದರ್ಶಕದ ವರೆಗೆ. ಬಹುಮಟ್ಟಿಗೆ ಮಿತಪಾರದರ್ಶಕ. ಕಾಠಿಣ್ಯ 6 ರಿಂದ 7. ಅಂದರೆ ಚಾಕುವಿನ ಅಲುಗಿನಿಂದ ಗೀರಬಹುದು. ಸಾಪೇಕ್ಷ ಸಾಂದ್ರತೆ 3.25 ರಿಂದ 3.5.

	ಬಣ್ಣವನ್ನನುಸರಿಸಿ ಪುಷ್ಕಿನೈಟ್ ಮತ್ತು ಆಕ್ಮಟೈಟ್ (ಹಸಿರಿನ ವಿವಿಧ ಛಾಯೆಗಳು). ಬಕ್ಲಾಂಡೈಟ್ (ಕಪ್ಪು ಬಣ್ಣ), ವಿದಮೈಟ್ (ಹವಳದ ಕೆಂಪು ಮತ್ತು ಹಳದಿ), ಟಮಾವೈಟ್ (ಅಚ್ಚಹಸಿರು ಅಥವಾ ಹಳದಿ ಎಂಬ ಬಗೆಗಳನ್ನೂ ರಾಸಾಯನಿಕ ಸಂಯೋಜನೆಗನುಗುಣವಾಗಿ ಪೀಮಾಂಟೈಟ್ ಮತ್ತು ಸುರ್ಸಸೈಟ್ (ಮ್ಯಾಂಗನೀಸ್ ಅಂಶಯುಕ್ತ) ಮತ್ತು ಹ್ಯಾನ್‍ಕಾಕೈಟ್ (ಸೀಸ, ಮ್ಯಾಂಗನೀಸ್ ಮುಂತಾದ ಅಂಶಯುಕ್ತ) ಎಂಬ ಬಗೆಗಳನ್ನು ಗುರುತಿಸಲಾಗಿದೆ. 

	ನೈಸ್ (ಗೀರುಶಿಲೆ), ಷಿಸ್ಟ್ (ಪದರುಶಿಲೆ), ಮಾರ್ಬಲ್ (ಅಮೃತಶಿಲೆ) ಮುಂತಾದ ರೂಪಾಂತರ ವರ್ಗದ ಶಿಲೆಗಳಲ್ಲಿ ಎಪಿಡೋಟನ್ನು ಕಾಣಬಹುದು; ಅಲ್ಲದೆ ಗಾರ್ನೆಟ್, ಹಾರ್ನ್‍ಬ್ಲೆಂಡ್, ಆಗೈಟ್, ಬಯೊಟೈಟ್, ಸ್ಕ್ಯಾಪೊಲೈಟ್, ಪ್ಲೇಜಿಯೊಕ್ಲೇಸ್ ಮುಂತಾದ ಖನಿಜಗಳು ರಾಸಾಯನಿಕವಾಗಿ ಶಿಥಿಲಗೊಂಡಾಗಲೂ ಕಾಣಿಸಿಕೊಳ್ಳುತ್ತದೆ. 

	ಈ ಖನಿಜ ಸಾಮಾನ್ಯವಾಗಿ ಎಲ್ಲ ಕಡೆ ಸಿಗುತ್ತದಾದರೂ ರಷ್ಯದ ಯೂರಲ್ ಪರ್ವತ, ಚೆಕೊಸ್ಲವೇಕಿಯದ ವೊರೇವಿಯ, ಆಸ್ಟ್ರಿಯದ ಸಾಲ್ಸ್‍ಬರ್ಗ್ ಮತ್ತು ಟೈರಾಲ್ ಪ್ರಾಂತಗಳಲ್ಲಿ ಉತ್ತಮ ಹರಳುಗಳು ದೊರಕಿವೆ. 

	ಉತ್ತಮ ಛಾಯೆಯ ಪಾರದರ್ಶಕ ಹರಳುಗಳನ್ನು ಹಲವು ವೇಳೆ ಜವಾಹಿರಿಯಲ್ಲಿ ಉಪಯೋಗಿಸುವುದುಂಟು.

(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ